ಕ್ಷಿಪ್ರಾಕ್ರಮಣ

ಪ್ರಸಕ್ತ ಸರ್ಕಾರವೊಂದನ್ನು ಉರುಳಿಸಿ ಅಧಿಕಾರವನ್ನು ಆಕ್ರಮಿಸಿಕೊಳ್ಳುವ ಉದ್ದೇಶದಿಂದ ಒಬ್ಬ ವ್ಯಕ್ತಿ ಅಥವಾ ಒಂದು ಗುಂಪು ಕೈಗೊಳ್ಳುವ ಹಠಾತ್ ಬಲಪ್ರಯೋಗ (ಕೂ ಡೆಟಾ). ಜಾರಿಯಲ್ಲಿರುವ ಕಾನೂನಿನ ಅಥವಾ ಸಂವಿಧಾನದ ನಿಯಮಗಳನ್ನು ಉಲ್ಲಂಘಿಸಿ ನಡೆಸುವ ಈ ಕಾರ್ಯಾಚರಣೆ ಹೆಚ್ಚು ಹಿಂಸಾತ್ಮಕವಾಗಿರುವುದಿಲ್ಲ. ಇತಿಹಾಸದಲ್ಲಿ ಕ್ಷಿಪ್ರಾಕ್ರಮಣ ಪ್ರಸಂಗಗಳು ಹೇರಳವಾಗಿ ಸಿಗುತ್ತವೆ. 1799ರ ನವೆಂಬರ್ 9ರಂದು ನೆಪೋಲಿಯನನ ನೇತೃತ್ವದಲ್ಲಿ ಫ್ರಾನ್ಸಿನಲ್ಲಿ ನಡೆದ ಆಕ್ರಮಣ ಒಂದು ಪ್ರಸಿದ್ಧ ಉದಾಹರಣೆ. ಫ್ರಾನ್ಸಿನ ದ್ವಿತೀಯ ಗಣರಾಜ್ಯ ಸಭೆಯನ್ನು ವಿಸರ್ಜಿಸಲು 1851ರ ಡಿಸೆಂಬರ್ 2ರಂದು ಲೂಯಿ ನೆಪೋಲಿಯನ್ ಕೈಗೊಂಡ ಕ್ರಮ ಇನ್ನೊಂದು. ಆಲಿವರ್ ಕ್ರಾಮ್ವೆಲನಿಂದ ಇಂಗ್ಲೆಂಡಿನ ಪಾರ್ಲಿಮೆಂಟ್ ವಿಸರ್ಜನೆ (ಏಪ್ರಿಲ್ 20, 1653), ಮುಸೊಲೀನಿಯ ನೇತೃತ್ವದಲ್ಲಿ ಫ್ಯಾಸಿಸ್ಟರಿಂದ ರೋಂ ಆಕ್ರಮಣ (ಅಕ್ಟೋಬರ್ 27,1922), ಹಿಟ್ಲರನ ಕೈವಾಡದಿಂದ ಬರ್ಲಿನಿನಲ್ಲಿ ನಾಟ್ಸಿ ದಾಂದಲೆ (ಮಾರ್ಚ್ 1933) ಫ್ರಾನ್ಸಿನ ಮೂರನೆಯ ಗಣರಾಜ್ಯವನ್ನು ವಿಸರ್ಜಿಸಿ ಮಾರ್ಷಲ್ ಪೆಟೇನ ಅಧ್ಯಕ್ಷತೆಯಲ್ಲಿ ಜರ್ಮನ್ ಕೈಗೊಂಬೆ ಸರ್ಕಾರ ಸ್ಥಾಪನೆ (ಜುಲೈ 1940)-ಇವೆಲ್ಲವೂ ವಿಶಾಲಾರ್ಥದಲ್ಲಿ ಕ್ಷಿಪ್ರಾಕ್ರಮಣಗಳೇ. ಸರ್ಕಾರದ ಮುಖ್ಯರನ್ನು ಕಿತ್ತುಹಾಕಿ ಬೇರೆಯವರು ಅಲ್ಲಿ ಕೂರುವುದು ಕ್ಷಿಪ್ರಾಕ್ರಮಣದ ಸೀಮಿತ ಅರ್ಥ. ಕ್ರಾಂತಿಗೂ ಕ್ಷಿಪ್ರಾಕ್ರಮಣಕ್ಕೂ ಮೂಲಭೂತವಾದ ವ್ಯತ್ಯಾಸಗಳಿವೆ. ಕ್ರಾಂತಿಯಂತೆ ಇದರಲ್ಲಿ ಸಾಮಾಜಿಕ ಆರ್ಥಿಕ ಧೋರಣೆಗಳು ಮೂಲತಃ ವ್ಯತ್ಯಾಸವಾಗುವುದಿಲ್ಲ. ವರ್ಗಗಳ ನಡುವೆ ಅಥವಾ ಗುಂಪುಗಳ ನಡುವೆ ಅಧಿಕಾರದ ವ್ಯಾಪಕವಾದ ಪುನರ್‍ಹಂಚಿಕೆಯಾಗುವುದಿಲ್ಲ. ಮಧ್ಯ ಮತ್ತು ದಕ್ಷಿಣ ಅಮೆರಿಕ, ಪಶ್ಚಿಮಏಷ್ಯ, ಆಫ್ರಿಕ ಮುಂತಾದ ಪ್ರದೇಶಗಳ ಹಲವು ರಾಜ್ಯಗಳಲ್ಲೂ ಪಾಕಿಸ್ತಾನ, ಬರ್ಮ, ಇಂಡೊನೇಷ್ಯ ಮುಂತಾದ ದೇಶಗಳಲ್ಲೂ ಎರಡನೆಯ ಮಹಾಯುದ್ಧದಿಂದ ಈಚೆಗೆ ಕ್ಷಿಪ್ರಾಕ್ರಮಣಗಳು ಜರುಗಿವೆ.       						(ಎನ್.ವಿ.ಎ.)